ಕ್ಷೀರಸ್ಫಟಿಕ

ಸಿಲಿಕದ ನೈಸರ್ಗಿಕ ಜಲಯೋಜಿತ (ಹೈಡ್ರೇಟೆಡ್) ರೂಪ (ಓಪಲ್). ಇದು ಸಿಲಿಕಸಂಯುಕ್ತ ಖನಿಜಗಳಲ್ಲಿ ಅತ್ಯಂತ ಅಮೂಲ್ಯವಾದದ್ದು. ಕ್ಷೀರಸ್ಫಟಿಕಗಳಲ್ಲಿ ಹಲವಾರು ಬಗೆಗಳಿವೆ. ಗಾಜಿನಂತೆ ಪಾರದರ್ಶಕವಾಗಿರುವ ಹೈಯಲೈಟ್ ಉತ್ತಮ ದರ್ಜೆಯದು. ವರ್ಣವೈವಿಧ್ಯವನ್ನು ಬಿಂಬಿಸುವ ಜಲಕ್ಷೀರ ಸ್ಫಟಿಕಗಳಿಗೆ ಅಗ್ನಿಕ್ಷೀರಸ್ಫಟಿಕಗಳೆನ್ನುತ್ತಾರೆ. ನಿಕಲ್ ಲೋಹಾಂಶದಿಂದ ಕೂಡಿದ್ದಲ್ಲಿ ಹರಳುಗಳು ಹಸಿರುವರ್ಣ ಪಡೆಯುವುವು. ಪ್ರಕೃತಿಯಲ್ಲಿ ಮರ ಶಿಲೀಕರಣವಾಗಿ ಮಾರ್ಪಾಡಾಗಬಹುದು. ಹೀಗೆ ಕ್ಷೀರಸ್ಫಟಿಕದಿಂದ ಶಿಲೀಕರಣವಾಗಿದ್ದಲ್ಲಿ ಅದನ್ನು ಮರಕ್ಷೀರಸ್ಫಟಿಕ (ವೂಡ್ ಓಪಲ್) ಎನ್ನುವರು. ಹೈಡ್ರೊಫೇನ್ ಎಂಬ ಬಗೆ ನೀರಿನಲ್ಲಿಟ್ಟಾಗ ಪಾರದರ್ಶಕವಾಗುವುದಲ್ಲದೆ ವರ್ಣವೈವಿಧ್ಯವನ್ನು ಕೂಡ ಪ್ರದರ್ಶಿಸುತ್ತದೆ. ಕ್ಯಾಚೊಲಾಂಗ್ ಎಂಬ ನಮೂನೆಯ ಕ್ಷೀರಸ್ಫಟಿಕ ಮುತ್ತಿನಂತೆ ಹೊಳೆಯುತ್ತದೆ. ಅಪಾರದರ್ಶಕ ಅಚ್ಚ ಬಿಳಿಯ, ಹಳದಿಯ ಹಾಗೂ ಹಸಿರು ವರ್ಣದ ಕ್ಷೀರಸ್ಫಟಿಕಗಳನ್ನು ಅಮೃತ ಸ್ಫಟಿಕಗಳೆಂದು (ಮಿಲ್ಕೀ ಓಪಲ್) ಕರೆಯುತ್ತಾರೆ. ಇವಲ್ಲದೆ ಮಿಣಗುವ ಚುಕ್ಕೆಗಳಿಂದ ಕೂಡಿರುವ ಕಪ್ಪು ಕ್ಷೀರ ಸ್ಫಟಿಕಗಳೂ ಉಂಟು.
ಮೊದಲಿಗೆ ಕ್ಷೀರಸ್ಫಟಿಕವನ್ನು ರೂಪರಹಿತವೆಂದು ಪರಿಗಣಿಸಿದ್ದರು. ಎಕ್ಸ್‍ಕಿರಣ ವಿಭಜನೆಯ ಆಧಾರದ ಮೇಲೆ ಅದರ ಅಂತರ ಸ್ತರರಚನೆಯಲ್ಲಿ ಆಲ್ಫ-ಕ್ರಿಸ್ಟಬೊಲೈಟ್ ಮತ್ತು ಬೀಟ-ಕ್ರಿಸ್ಟಬೊಲೈಟ್ (ಬೆಣಚು ಕಲ್ಲಿನ ಬಹುರೂಪತ್ವ) ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ. ಅಮೂಲ್ಯ ರತ್ನಗಳಲ್ಲಿ ಇರಬಹುದಾದ ವಿಶೇಷ ಗುಣಗಳಂತೆ ವರ್ಣವೈವಿಧ್ಯ ವರ್ಣಸ್ಫುರಣ ಹಾಗೂ ವರ್ಣಮಿಣಿಕೆಗಳನ್ನು ಕ್ಷೀರಸ್ಫಟಿಕದಲ್ಲೂ ಕಾಣಬಹುದು.

ಬೆಣಚು ಕಲ್ಲಿನ ವರ್ಗಕ್ಕೆ ಸೇರಿದ ಖನಿಜಗಳಲ್ಲಿ ಕೇವಲ ಸಿಲಿಕಾಂಶ ಮಾತ್ರವಿರುತ್ತದೆ. ಆದರೆ ಕ್ಷೀರಸ್ಫಟಿಕದಲ್ಲಿ ಆದರೆ ಕ್ಷೀರಸ್ಫಟಿಕದಲ್ಲಿ ಸಿಲಿಕಾಂಶದ ಜೊತೆಗೆ ಜಲಾಂಶವೂ ಸಂಯೋಜಿತವಾಗಿರುವುದು. ಜಲಾಂಶ 1%-2%ರ ವರೆಗೂ ಇರುವುದಾದರೂ ಉತ್ತಮ ದರ್ಜೆಯ ಕ್ಷೀರಸ್ಫಟಿಕಗಳಲ್ಲಿ 6%-10%ರ ವರೆಗೂ ಇರುವುದು. ಕ್ಷೀರ ಸ್ಫಟಿಕದಲ್ಲಿ ಪ್ರಧಾನವಾಗಿ ಕಾಣುವ ವರ್ಣಸ್ಫುರಣಕ್ಕೂ ಅದರಲ್ಲಿ ಸಂಯೋಜಿತವಾಗಿರುವ ಜಲಾಂಶಕ್ಕೂ ಒಂದು ವಿಧದಲ್ಲಿ ನಿಕಟ ಸಂಬಂಧ ಉಂಟು. ಕ್ಷೀರಸ್ಫಟಿಕವನ್ನು ಒಣ ಹವೆಯಲ್ಲಿ ಇಟ್ಟಾಗ ಅದು ತನ್ನ ಜಲಾಂಶವನ್ನು ಕಳೆದುಕೊಳ್ಳುವುದರ ಜೊತೆಗೆ ವರ್ಣಸ್ಫುರಣವನ್ನು ಕೂಡ ಕಳೆದುಕೊಳ್ಳುತ್ತದೆ. ಹಾಗೆಯೇ ಅದನ್ನು ಸ್ವಲ್ಪಕಾಲ ನೀರಿನಲ್ಲಾಗಲಿ ಹಸಿಯ ಆಲೂಗಡ್ಡೆಯಲ್ಲಾಗಲಿ ಇಟ್ಟಾಗ ತನ್ನ ಎಂದಿನ ವರ್ಣ ಸ್ಫುರಣತೆಯನ್ನು ಮತ್ತೆ ಪಡೆಯುತ್ತದೆ.

ಕ್ಷೀರಸ್ಫಟಿಕವನ್ನು ಅಗ್ನಿಶಿಲೆಗಳಲ್ಲಿ ಇರುವ ಕುಳಿಗಳಲ್ಲಿಯೂ ಸಣ್ಣ ಬಿರುಕುಗಳಲ್ಲಿಯೂ ವಿಶೇಷವಾಗಿ ಕಾಣಬಹುದು. ಅವು ತೆಳುವಾದಪದರಗಳಾಗಿಯೋ ಸಣ್ಣ ಸಣ್ಣ ಗುಂಡಾಕೃತಿಯ ಹರಳುಗಳಾಗಿಯೋ ಅಥವಾ ಉದ್ದನೆಯ ಸ್ಪಾಲಗ್ ಮೈಟುಗಳಾಗಿಯೋ ಸಿಕ್ಕುತ್ತವೆ. ಕ್ಷೀರಸ್ಫಟಿಕದ ಪ್ರಮುಖ ನಿಕ್ಷೇಪಗಳು ಚೆಕೋಸ್ಲೇವಿಯದಲ್ಲಿದ್ದು ಈಗ ಮುಗಿಯುತ್ತ ಬಂದಿವೆ. ಪ್ರಸ್ತುತ ಕ್ಷೀರಸ್ಫಟಿಕದ ನಿಕ್ಷೇಪಗಳು ಮೆಕ್ಸಿಕೋ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿವೆ. ಭಾರತದಲ್ಲಿ ಅಸ್ಸಾಂ, ಮಧ್ಯ ಪ್ರದೇಶ, ಒರಿಸ್ಸ, ರಾಜಸ್ಥಾನ, ಕಾಶ್ಮೀರ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಸಿಕ್ಕುತ್ತದೆ. ಮೈಸೂರು ದೇಶದ ಚನ್ನರಾಯ ಪಟ್ಟಣದ ಹತ್ತಿರವೂ ಕ್ಷೀರಸ್ಫಟಿಕ ಅಲ್ಪಮೊತ್ತದಲ್ಲಿ ದೊರೆಯುತ್ತದೆ. ಭಾರತದಲ್ಲಿ ದೊರೆಯುವ ಕ್ಷೀರಸ್ಫಟಿಕಗಳು ಕೆಲವು ಅಪಾರದರ್ಶಕವಾದರೆ ಮತ್ತೆ ಕೆಲವುಪಾರದರ್ಶಕ. ಇವುಗಳ ಬಣ್ಣ ಹಾಲು ಬಿಳಿ, ಹಳದಿ ಅಥವಾ ಕಂದು. ಅಪರೂಪವಾಗಿ ಕೆಲವು ಕಡೆ ನೀಲಿ ಮಿಶ್ರಿತ ಬಿಳುಪು ಹರಳುಗಳು ಕೂಡ ದೊರೆಯುವುದುಂಟು.                            						(ಎಂ.ಎನ್.ವಿ.)